ಕೋಗಿಲೆಯ ಇನಿದನಿ..

ಜೀವ ಜಗತ್ತು ವಿಸ್ಮಯಗಳ ಆಕರ. ಅದರ ಎಳೆಯೊಂದನ್ನು ಹಿಡಿದು ಹೊರಟರೆ ಅದ್ಭುತವೇ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಹಕ್ಕಿಗಳೆಡೆಗಿನ ಆಸಕ್ತಿ ಹೇಗೆ ಹುಟ್ಟಿತೆಂದು ಗೊತ್ತಿಲ್ಲ. ಮೊದಮೊದಲು ಹಕ್ಕಿಯ ಗೂಡು, ಹಕ್ಕಿಯ ಮರಿಗಳೆಂದರೆ ಏನೋ ಆಕರ್ಷಣೆ. ಹಕ್ಕಿಯ ಮರಿಗಳೆಂದರೆ ನಮ್ಮೊಡನೆ ಆಡಲು ಹುಟ್ಟಿದವೇನೋ ಎಂಬ ಭಾವ. ಬಾಲ್ಯದಲ್ಲಿ ಅದೆಷ್ಟು ಗೂಡುಗಳನ್ನು ತಂದು ಮನೆಯಲ್ಲಿ ಇಟ್ಟಿದ್ದೆವೋ ? ಎಷ್ಟೋ ಸಾರಿ ಹಕ್ಕಿ ಮರಿಗಳನ್ನು ಮನೆಯಲ್ಲಿ ಸಾಕುವ ವ್ಯರ್ಥ ಪ್ರಯತ್ನ ಮಾಡಿದ್ದೆ. ಹಿಂದೆಲ್ಲ ನಮ್ಮ ಮನೆಗೆ ಕೆಲಸಕ್ಕೆ ಬರುವ ಕೆಲವರು ಗುಂಪು ಕಟ್ಟಿಕೊಂಡು ಶಿಕಾರಿಗೆ ಹೋಗುತ್ತೇವೆಂದು ಹೇಳುವುದನ್ನು ಕೇಳಿದ್ದೆವು. ಹಾಗೇ ನಾವು ನಮ್ಮ ವಯಸ್ಸಿನವರೆಲ್ಲ ಜೊತೆಯಾಗಿ ಹಕ್ಕಿ ಗೂಡು ಹುಡುಕಲು ಹೊರಡುತ್ತಿದ್ದೆವು. ಮರ ಹತ್ತಿ ಗೂಡುಗಳನ್ನು ತೆಗೆಯುತ್ತಿದ್ದುದೇ ನಾನು. ಮನೆಗೆ ಬರುವಾಗ ಹೊರಸಲ ಹಕ್ಕಿಯ (Spotted Dove ) ಆಕಾರವೇ ಇಲ್ಲದ ಕಸ ಕಡ್ಡಿ ಸೇರಿಸಿ ಇಟ್ಟಂತಹ ಗೂಡು , ಬಟ್ಟಲ ಗಾತ್ರದ ಪಿಕಳಾರ (Bulbul ) ಹಕ್ಕಿಯ ಗೂಡು, ಜೋತಾಡುವ ಹೂವಿನ ಹಕ್ಕಿಯ ಗೂಡು ಹೀಗೆ ಎಷ್ಟೋ ರೀತಿಯ ಗೂಡುಗಳನ್ನು ಹುಡುಕಿ ತರುತ್ತಿದ್ದೆವು. ಹೆಚ್ಚಿನ ಬಾರಿ ನಮಗೆ ಹಕ್ಕಿಗಳು ಬಿಟ್ಟು ಹೋಗಿ ಹಾಳಾಗಿದ್ದ ಗೂಡು ಮಾತ್ರವೇ ಸಿಗುತ್ತಿತ್ತು.

ಮುಂದೇನು ಎಂದರೆ ನಮ್ಮ ಮನೆಯ ಹೂವಿನ ಗಿಡಗಳಲ್ಲೆಲ್ಲ ಗೂಡು ತಂದು ಇಟ್ಟು, ಹಕ್ಕಿಗಳು ಬಂದು ಮರಿ ಮಾಡುತ್ತವೆ ಎಂಬ ಆಶಾವಾದದೊಂದಿಗೆ ಅವುಗಳ ಆಗಮನಕ್ಕಾಗಿ ಕಾಯುವುದು. ಯಾವ ಹಕ್ಕಿಯೂ ಬರಲಿಲ್ಲ. ಮರಿಮಾಡಲೂ ಇಲ್ಲ. ಆದರೆ ಒಮ್ಮೊಮ್ಮೆಬೆಚ್ಚಗಿನ ಆ ಗೂಡೊಳಗೆ ಹಾವುಗಳು ಸಿಂಬೆ ಸುತ್ತಿ ಮಲಗಿರುತ್ತಿದ್ದವು. ಆಮಂತ್ರಣವಿಲ್ಲದ ಆ ಆಗಂತುಕರ ಆಗಮನ ನಮಗೆ ಬೇಡವಾಗಿತ್ತು. ನಾವು ತಂದಿಟ್ಟ ಗೂಡಿಗೆ ಯಾವತ್ತೂ ಹಕ್ಕಿಗಳು ಬರುವುದಿಲ್ಲವೆಂದು ಅಷ್ಟೊತ್ತಿಗಾಗಲೇ ಅರಿವಾಗಿತ್ತು. ನಾವೂ ಕಾಯುವುದನ್ನು ನಿಲ್ಲಿಸಿದೆವು. ಆಮೇಲೆ ವಿಧವಿಧದ ಹಕ್ಕಿಯ ಪುಕ್ಕಗಳನ್ನು ಕಲೆ ಹಾಕುವ ಅಭ್ಯಾಸವಿತ್ತು ನನಗೆ. ಹಕ್ಕಿ ಪುಕ್ಕಗಳಿಗೋಸ್ಕರ ಕಾಡಲ್ಲಿ ಅಲೆದದ್ದು ನೆನಪಿದೆ. “ಸುಧಾ” ದಲ್ಲಿ ಬರುವ ಎಲ್ಲ ಹಕ್ಕಿಯ ಚಿತ್ರಗಳನ್ನೂ ಕತ್ತರಿಸಿ ಅಂಟಿಸಿಡುವ ಗೀಳು ಇತ್ತು.

ಇಷ್ಟಾದರೂ ಯಾವ ಪಕ್ಷಿಯ ಬಗ್ಗೆಯೂ ಗೊತ್ತಿರಲಿಲ್ಲ. ಹಕ್ಕಿಗಳ ಬಗ್ಗೆ ವೈಜ್ಞಾನಿಕವಾಗಿ ಅದ್ಯಯನ ಮಾಡುವ Ornithology ಎಂಬ ವಿಭಾಗವಿದೆ ಎಂದು ತಿಳಿದಿದ್ದೇ ತೀರಾ ಇತ್ತೀಚೆಗೆ. ೮ ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಬರೆದಂತಹ “ಗೀಜುಗನ ಗೂಡು” ಲೇಖನವನ್ನು ಪಾಠವನ್ನಾಗಿ ಅಳವಡಿಸಿದ್ದರು. ಅದನ್ನು ತೇಜಸ್ವಿಯವರ “ಹೆಜ್ಜೆ ಮೂಡದ ಹಾದಿ” ಎಂಬ ಪುಸ್ತಕದಿಂದ ಆರಿಸಲಾಗಿತ್ತು. ಆ ಪುಸ್ತಕವನ್ನು ಕೊಂಡು ತಂದೆ. ಅದೇ ಮೊದಲು ನನ್ನಲ್ಲಿ ಆಸಕ್ತಿ ಹುಟ್ಟಿಸಿದ ಪುಸ್ತಕ. ಅದರಿಂದ ಕೆಲವು ಹಕ್ಕಿಗಳ ಪರಿಚಯವಾಯಿತು. ಆದರೆ ನನ್ನ ಬಳಿ ಬೈನಾಕ್ಯುಲರ್ ಇರಲಿಲ್ಲ. ಹೆಚ್ಚಿನ ಹಕ್ಕಿಗಳನ್ನು ಸರಿಯಾಗಿ ಗುರುತಿಸಲು ಸಾದ್ಯವಾಗುತ್ತಿರಲಿಲ್ಲ. ಆ ಪುಸ್ತಕದಲ್ಲಿ ಹೆಸರುಗಳು ಕನ್ನಡದಲ್ಲಿ ಇರುತ್ತಿದ್ದುದರಿಂದ ಅವುಗಳ ಬಗ್ಗೆ ಇಂಟರ್‌ನೆಟ್ ಅಲ್ಲಿ ಹುಡುಕಿ ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಬರಿಯ bulbulಗಳು, Sun birdಗಳು ಮಾತ್ರವೇ ಕಾಣಸಿಗುತ್ತಿದ್ದವು.

ಆಮೇಲೆ ತಂದಿದ್ದು ಸಲೀಂ ಅಲಿ ಅವರು ಬರೆದಂತಹ “The Book of Indian Birds” ಎನ್ನುವ ಪುಸ್ತಕ. ಜೊತೆಗೆ ಇದ್ದದ್ದು ಗೆಳೆಯರಾದ ವಿನಾಯಕನ binocular ಮತ್ತು ತೇಜಸ್ ನ DSLR camera. ಬೆಂಗಳೂರಿನ ಕೆರೆಗಳಲ್ಲಿ ಕಂಡು ಬರುವ ವಲಸೆ ಹಕ್ಕಿಗಳಿಂದ ಹಿಡಿದು ಪಶ್ಚಿಮ ಘಟ್ಟಗಳ ಅಪೂರ್ವ ಪಕ್ಷಿಗಳ ಬಗೆಗೂ ತಿಳಿದುಕೊಳ್ಳಲು ಪ್ರಾರಂಭಿಸಿದೆವು. ವಾರದ ಕೊನೆಯ ದಿನಗಳ ನಮ್ಮ ಚಾರಣ ಈ ಹವ್ಯಾಸಕ್ಕೆ ಇಂಬು ನೀಡಿತು.

ಇವೆಲ್ಲವುಗಳ ಬಗ್ಗೆ ಬರೆಯೋಣವೆಂದು ಆಲೋಚಿಸಿ, ಈ blog ಬರೆಯಲು ಪ್ರೋತ್ಸಾಹಿಸಿದ, ಗೆಳೆಯರಾದ ತೇಜಸ್ ಹಾಗೂ ವಿನಾಯಕ ನಮ್ಮ ಕಾನ ಕೋಗಿಲೆ ಯ ಉಳಿದ ಬರಹಗಾರರು. ಪಕ್ಷಿ ವೀಕ್ಷಣೆಯ ನಮ್ಮ ಅನುಭವಗಳನ್ನು ದಾಖಲಿಸುತ್ತಾ, ನಿಮ್ಮೊಂದಿಗೆ ಹಂಚಿಕೊಳ್ಳುವುದೇ ಇದರ ಮುಖ್ಯ ಉದ್ದೇಶ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s